ಚ್ಯಾನಿಂಗ್, ವಿಲಿಯಂ ಎಲೆರಿ
1780-1842. ಅಮೆರಿಕದ ಪಾದ್ರಿ ಮತು ಏಕಮೂರ್ತಿವಾದದ ಪ್ರವರ್ತಕ. ನ್ಯೂ ಪೋರ್ಟ್‍ನಲ್ಲಿ ಹುಟ್ಟಿದ ಈತ ತನ್ನ ಚಿಕ್ಕಪ್ಪ ರೆವರೆಂಡ್ ಹೆನ್ರಿ ಚ್ಯಾನಿಂಗನ ಮೇಲ್ವಿಚಾರಣೆಯಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದ. ವಿದ್ಯಾರ್ಥಿದೆಸೆಯಲ್ಲೇ ಈತನಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳು ಬೇರೂರಿದ್ದವು. 1794ರಲ್ಲಿ ಹಾರ್ವರ್ಡ್ ಕಾಲೇಜು ಸೇರಿ ತನ್ನ 18ನೆಯ ವಯಸ್ಸಿಗೆ ಪದವೀಧರನಾದ (1798). ಅನಂತರ ಲಿಚ್‍ಮಂಡ್‍ನಲ್ಲಿ ಖಾಸಗಿ ಕುಟುಂಬವೊಂದರ ಶಿಕ್ಷಕನಾದ.
ಫೆಡರಲ್ ಸ್ಟ್ರೀಟ್ ಕಾನ್ಗ್ರೇಷನಲ್ ಚರ್ಚ್‍ನ ಧರ್ಮೋಪದೇಶಕನಾಗಿ ಈತ ದೀಕ್ಷೆ ಪಡೆದದ್ದು 1803ರಲ್ಲಿ. ಬಾಸ್ಟನ್ನಿನ ಚರ್ಚಿನಲ್ಲಿ ಕಾರ್ಯನಿರತನಾಗಿದ್ದಾಗ ಈತನ ಜೀವನದಲ್ಲಿ ತುಂಬ ಬದಲಾವಣೆಗಳಾದವು. ರೆವರೆಂಡ್ ಜೇರೆಡ್ ಸ್ಟಾಕ್ರ್ಸ್‍ನ ದೀಕ್ಷಾ ಸಮಯದಲ್ಲಿ (1819) ಮಾಡಿದ ಧರ್ಮೋಪದೇಶದಲ್ಲಿ ಈತನ ಏಕಮೂರ್ತಿವಾದದ ಗಟ್ಟಿ ನಡಿಗೆಯನ್ನು ಕಾಣಬಹುದು. ಅಂದು ನವ ಇಂಗ್ಲೆಂಡಿನ ಚರ್ಚುಗಳು ನಂಬಿದ್ದ ಕ್ವಾಲ್ವನಿಸಂ (ನೋಡಿ- ಕ್ಯಾಲ್ವಿನ್,-ಜಾನ್) ವಿರುದ್ಧ ಈತ ತನ್ನವಾದವನ್ನು ಮಂಡಿಸಿದ. 1820ರಲ್ಲಿ ಈತ ಪ್ರಗತಿಪರ ಕಾನ್ಗ್ರೇಷನಲ್ ಪಾದ್ರಿಗಳ ಸಮ್ಮೇಳನವೊಂದನ್ನು ಕರೆದ; ಐದು ವರ್ಷಗಳ ಅನಂತರ ಅಮೆರಿಕದ ಏಕಮೂರ್ತಿಗಳ ವಾದಿಗಳ ಸಂಘವೊಂದನ್ನು ಸ್ಥಾಪಿಸಿದ. 

ಚ್ಯಾನಿಂಗ್ ಎಲ್ಲ ಹಂತದಲ್ಲೂ ಕಂದಾಚಾರ ಮತ್ತು ಮಡಿವಂತಿಕೆಯನ್ನು ವಿರೋಧಿಸಿದ. ಈತ ಮಂಡಿಸಿದ ತತ್ತ್ವಗಳನ್ನು ನವ ಇಂಗ್ಲೆಂಡಿನ 120 ಚರ್ಚುಗಳು ಅನುಸರಿಸಿದವು. ಈತನ ಪ್ರಗತಿಪರ ತತ್ತ್ವಗಳು ಹೊಸ ಹೊಸ ಸಿದ್ಧಾಂತಗಳನ್ನು ಮಂಡಿಸುವುದಕ್ಕಿಂತ ಹೆಚ್ಚಾಗಿ ಮಾನವೀಯತೆ ಹಾಗೂ ಸಹಿಷ್ಣುತೆಯನ್ನು ಬೋಧಿಸುವಂಥವಾಗಿದ್ದವು. ಈತನ ಬರೆಹ ಹಾಗೂ ಧರ್ಮೋಪದೇಶಗಳು ಅಮೆರಿಕದ ಪ್ರಸಿದ್ಧ ಲೇಖಕರಾದ ಆರ್.ಡಬ್ಲ್ಯು ಎಮರ್‍ಸನ್, ಡಬ್ಲ್ಯು.ಸಿ. ಬ್ರೈಯಾಂಟ್, ಎಚ್.ಡಬ್ಲ್ಯು, ಲಾಂಗ್ ಫೆಲೋ, ಜೆ.ಆರ್. ಲೊಯೆಲ್ ಮತ್ತು ಓ.ಡಬ್ಲ್ಯು. ಹೊಮ್ಸ್ ಮುಂತಾದವರ ಮೇಲೆ ತುಂಬ ಪ್ರಭಾವ ಬೀರಿದುವು ಯುದ್ಧವನ್ನು ತಪ್ಪಿಸಲು ಈತ ಮ್ಯಾಸಚುಸೆಟ್ಸ್ ಪೀಸ್ ಸೊಸೈಟಿಯೊಂದನ್ನು ಸ್ಥಾಪಿಸಿದ.
1821ರಲ್ಲಿ ಚ್ಯಾನಿಂಗ್ ವಿದೇಶಪ್ರವಾಸವನ್ನು ಕೈಗೊಂಡು ವಡ್ರ್ಸ್‍ವರ್ತ್, ಕೋಲ್‍ರಿಜ್ ಮುಂತಾದ ಹೆಸರಾಂತ ಕವಿಗಳನ್ನು ಸಂಧಿಸಿದ. ವೆಸ್ಟ್‍ಇಂಡೀಸಿನ ಪ್ರವಾಸದ ಪರಿಣಾಮವಾಗಿ ನೀಗ್ರೋ ಸ್ಲೇವರಿ (1835) ಎಂಬ ಗ್ರಂಥವನ್ನು ಬರೆದ ಗುಲಾಮರ ವಿಮೋಚನೆಯಾಗಲೇಬೇಕೆಂದು ತನ್ನ ಪುಸ್ತಕದಲ್ಲಿ ಸಾರಿದ. ಗುಲಾಮರ ವಿಮೋಚನೆ ಕೇವಲ ಸರ್ಕಾರದ ಆದೇಶದಿಂದ ಸಾಧ್ಯವಾಗದು; ಅದು ಜನರ ತಿಳುವಳಿಕೆಯಿಂದ ಸುಲಭ ಸಾಧ್ಯವಾಗುತ್ತದೆ ಎಂದು ತನ್ನ ಸೆಲ್ಫ್ ಕಲ್ಚರ್‍ನಲ್ಲಿ (1838) ಪ್ರತಿಪಾದಿಸಿದ. 1842ರಲ್ಲಿ ಈತ ಬೆನ್ನಿಂಗ್ ಟನ್‍ನಲ್ಲಿ ಕಾಲವಾದ.

	ಚ್ಯಾನಿಂಗ್ ತನ್ನ ಸಮಕಾಲೀನ ಪಾರಮಾರ್ಥಿಕ ಜ್ಞಾನಿಗಳಲ್ಲೆಲ್ಲ ಮುಖ್ಯನೆನಿಸಿದ್ದ. ಈತನಿಗೆ ಎಲ್ಲ ಪ್ರಶ್ನೆಗಳೂ ನೈತಿಕ ಪ್ರಶ್ನೆಗಳೇ. ಅವುಗಳಿಗೆ ಪರಿಹಾರವನ್ನು ಕಂಡುಹಿಡಿಯುವುದೇ ಆತನ ಕೆಲಸವಾಯಿತು.
(ಎ.ಎಂ.ಪಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ